ಸಚಿವ ಡಿ. ಸುಧಾಕರ್ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ - ಜೆಡಿಎಸ್ ಗಂಭೀರ ಆರೋಪ | JANATA NEWS
ಬೆಂಗಳೂರು : ಸಚಿವರಾದ ಡಿ. ಸುಧಾಕರ್ ಅವರ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ ಮಾಡುತ್ತಿದೆ ಎಂದೂ, ಸಚಿವರ ಪುತ್ರರ ಹೇಳಿಕೆಗೂ, ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆಯೂ ರಾಜ್ಯ ಜೆಡಿಎಸ್ ಪಕ್ಷ ಸಂಶಯ ವ್ಯಕ್ತಪಡಿಸಿದ್ದು, ಸ್ಪಷ್ಟನೆಗೆ ಒತ್ತಾಯಿಸಿದೆ.
"ಸಚಿವರಾದ ಡಿ. ಸುಧಾಕರ್ ಅವರ ಪುತ್ರರು ತಮ್ಮ ತಂದೆಯ ಆರೋಗ್ಯದ ಬಗ್ಗೆ ರಾಜ್ಯದ ಜನರ ಎದುರು ಹೇಳಲು ಯಾರೋ ಬರೆದುಕೊಟ್ಟ ಸ್ಕ್ರೀಪ್ಟ್ ಓದುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತಿದೆ. 10ಕ್ಕೂ ಹೆಚ್ಚು ಬಾರಿ ಎಡಿಟ್ ಮಾಡಿರುವ ಆ ವಿಡಿಯೋ ನೋಡಿದರೆ, ಯಾರದೋ ಒತ್ತಡಕ್ಕೆ ಮಣಿದು ರಾಜಕೀಯವಾಗಿ ಈ ರೀತಿ ಬಲವಂತದ ಹೇಳಿಕೆ ಕೊಡಿಸಲಾಗಿದೆ. ಇದರ ಹಿಂದಿರುವ ಆ ಮಹಾನಾಯಕ ಯಾರು? "
"ಸಿಎಂ ಸಿದ್ದರಾಮಯ್ಯ ಭೇಟಿಗೂ ಮುನ್ನ ಸಚಿವರು ವೆಂಟಿಲೇಟರ್ನಿಂದ ಉಸಿರಾಟ ಮಾಡ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದರು. ಸಚಿವರಾದ ಡಿ. ಸುಧಾಕರ್ ಅವರ ಆರೋಗ್ಯ ವಿಚಾರಿಸಲು ದಿನಾಂಕ : 25/04/2026ರಂದ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು, ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಅವರಿಗೆ ಪ್ರಜ್ಞೆ ಬಂದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು."
"ಸಿಎಂ ಭೇಟಿ ಬಳಿಕ ಅಂದರೆ ಮಾರನೆ ದಿನ ದಿನಾಂಕ : 26/04/2026 ರಂದು ಡಿಸಿಎಂ ಡಿಕೆ.ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದಿರುವ ಚಿತ್ರದಲ್ಲಿ ಯಾವುದೇ ವೆಂಟಿಲೇಟರ್ ಕಾಣಿಸುತ್ತಿಲ್ಲ. ಹಾಗಾದರೆ, ಒಂದೇ ದಿನದಲ್ಲಿ ವೆಂಟಿಲೇಟರ್ ಕಣ್ಮರೆಯಾಯಿತೆ? ಸಚಿವರು ಲೈಫ್ ಸಪೋರ್ಟ್ ಇಲ್ಲದೆ ಉಸಿರಾಟ ಮಾಡುತ್ತಿದ್ದಾರೆಯೇ, ಅವರ ಆರೋಗ್ಯ ಸಮಸ್ಯೆಗಳು ನಿವಾರಣೆ ಆಯಿತೇ?"
"ಸಚಿವರ ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಯಾಕಿಷ್ಟು ರಹಸ್ಯ ಮಾಡುತ್ತಿದೆ? ಅವರ ಆರೋಗ್ಯದ ಚೇತರಿಕೆ ಬಗ್ಗೆ ಆಸ್ಪತ್ರೆಯವರೂ ಯಾಕೆ ಹೆಲ್ತ್ ಬುಲೆಟಿನ್ ಹೊರಡಿಸುತ್ತಿಲ್ಲ? ಇದು ರಾಜ್ಯದ ಜನರನ್ನು ಕಾಡುತ್ತಿರುವ ಆತಂಕದ ಪ್ರಶ್ನೆ. ಇದನಷ್ಟೇ ಕೇಂದ್ರ ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿರುವುದು. ದಯವಿಟ್ಟು ಸತ್ಯ ಹೇಳಿ.", ಎಂದು ಪ್ರತಿಪಕ್ಷ ಜೆಡಿಎಸ್ ಒತ್ತಾಯಿಸಿದೆ.