ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ | JANATA NEWS
ಹುಬ್ಬಳ್ಳಿ : ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧ ಸರ್ಕಾರ ದಾರಿ ತಪ್ಪಿಸುತ್ತಿದೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಅವರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ನಡೆದ ಮೊದಲ ದಿನ ನನ್ನ ಜೊತೆಗೆ ಇದ್ದವರು, ಇಂದು ನನ್ನ ಬೆನ್ನಿಗೆ ನಿಂತಿಲ್ಲ, ಘಟನೆ ವೈಯಕ್ತಿಕ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರು ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷದಲ್ಲಿ ಇದ್ದವರೇ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮೂಲಕ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.
ನಮ್ಮದು ಕ್ರಿಮಿನಲ್ ಹಿನ್ನೆಲೆಯುಳ್ಳ ಕುಟುಂಬ ಅಲ್ಲ. ಐದು ಮಂದಿ ಸೇರಿ ನನ್ನ ಮಗಳ ಹತ್ಯೆ ಮಾಡಿದ್ದಾರೆ. ಉಳಿದ ಫಯಾಜ್‌ನನ್ನ ಮುಂದಕ್ಕೆ ಬಿಟ್ಟು ಕೊಲೆ ಮಾಡಿಸಿದ್ದಾರೆ. ಆ ಸಂದರ್ಭದಲ್ಲಿ ಉಳಿದ ನಾಲ್ಕೂ ಜನರು ಅಲ್ಲೇ ಇದ್ದರು. ಆದ್ರೆ 100ಕ್ಕೆ ನೂರು ಪೊಲೀಸ್ ಆಯುಕ್ತರು ಗೃಹ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಆಡಳಿತ ಪಕ್ಷದ ಕೆಲ ಸ್ಥಳೀಯ ಜನಪ್ರತಿನಿಧಿಗಳೂ ತಪ್ಪು ಮಾಹಿತಿ ನೀಡಿದ್ದಾರೆ. ಗೃಹಸಚಿವರನ್ನ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಬೆಳೆವಣಿಗೆ ನೋಡಿದರೆ ಪ್ರಕರಣ ದಾರಿ ತಪ್ಪುವ ಹಾಗೆ ಕಾಣುತ್ತಿದೆ. ಸಿ.ಎಂ ಅವರಿಗೆ ಪತ್ರ ಬರೆದು ನಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ನನ್ನ ಮಗಳ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ನನ್ನ ಮಗಳ ಬಗ್ಗೆ ಸಮಾಜದಲ್ಲಿ ತಪ್ಪು ತಿಳುವಳಿಕೆ ಬರುವಂತೆ ಮಾಡಿದ್ದಾರೆ. ಆರೋಪಿ ಜೈಲಿನಲ್ಲಿದ್ದರು ಖಾತೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಈ ಕುರಿತು ವಕೀಲರೊಂದಿಗೆ ಮಾತನಾಡಿದ್ದೇನೆ. ಸೈಬರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಿದ್ದೇನೆ ಎಂದು ಹೇಳಿದರು.