ರಾಜ್ಯಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ : ಮೇಲ್ಮನೆಯಲ್ಲಿ ಮೊದಲ ಭಾರಿಗೆ ಬಹುಮತ ಸಾಧಿಸಿದ ಎನ್‌ಡಿಎ | JANATA NEWS
ನವದೆಹಲಿ : ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 12 ಸದಸ್ಯರು ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮೇಲ್ಮನೆಯಲ್ಲಿ ಮೊದಲ ಭಾರಿಗೆ ಬಹುಮತವನ್ನು ಪಡೆದಿದೆ.
ಉಪಚುನಾವಣೆಯಿಂದ ಬಿಜೆಪಿಗೆ ಬಂದಿರುವ ಬಹುಮತವು ರಾಜ್ಯಸಭೆಯಲ್ಲಿ ವಿವಾದಾತ್ಮಕ ಮಸೂದೆಗಳ ಹಾದಿಯನ್ನು ಸುಗಮಗೊಳಿಸುತ್ತದೆ.
ರಾಜ್ಯಸಭೆ ಉಪಚುನಾವಣೆಯಲ್ಲಿ ಬಿಜೆಪಿ 9 ಸ್ಥಾನ ಗೆದ್ದಿದ್ದು, ಎನ್‌ಡಿಎ ಮಿತ್ರ ಪಕ್ಷಗಳಾದ ಎನ್‌ಸಿಪಿ(ಅಜಿತ್ ಪವಾರ್ ಬಣ) ಮತ್ತು ರಾಷ್ಟ್ರೀಯ ಲೋಕ ಮಂಚ್(ಆರ್.ಎಲ್.ಎಂ)ನ ತಲಾ ಒಬ್ಬರು ಕ್ರಮವಾಗಿ ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ತೆಲಂಗಾಣದಿಂದ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.
ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಹರಿಯಾಣ, ಅಸ್ಸಾಂ ಮತ್ತು ಮಹಾರಾಷ್ಟ್ರದ ರಾಜ್ಯಸಭಾ ಸ್ಥಾನಗಳನ್ನು ಸಂಪೂರ್ಣವಾಗಿ ಬಿಜೆಪಿ ಗೆದ್ದಿದೆ.
ಕೇಂದ್ರ ಸಚಿವರಾಗಿದ್ದ ಜಾರ್ಜ್ ಕುರಿಯನ್ (ಮಧ್ಯಪ್ರದೇಶದಿಂದ) ಮತ್ತು ರವನೀತ್ ಸಿಂಗ್ ಬಿಟ್ಟೂ (ರಾಜಸ್ಥಾನದಿಂದ) ಜೂನ್‌ನಲ್ಲಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಾಗ ಇಬ್ಬರೂ ಸಂಸದರಾಗಿರಲಿಲ್ಲ. ಮಂತ್ರಿಯಾದ 6 ತಿಂಗಳ ಒಳಗಡೆ ಸಂಸದರಾಗಬೇಕಾಗಿರುವ ಕಾರಣ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ.
ರಾಜ್ಯಸಭೆಯ 10 ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಆರ್‌ಎಸ್‌ನ ಕೇಶವ ರಾವ್ ಹಾಗೂ ಬಿಜೆಡಿಯ ಮಮತಾ ಮೊಹಾಂತ ಅವರು ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರುವ ಮುನ್ನ ರಾಜೀನಾಮೆ ನೀಡಿದ್ದರಿಂದ 12 ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.
ಈ ಮಧ್ಯೆ, ರಾಷ್ಟ್ರಪತಿಗಳ ಕೋಟಾದ 4 ನಾಮನಿರ್ದೇಶಿತ ಸ್ಥಾನಗಳು ಇನ್ನೂ ಖಾಲಿಯಿದ್ದು ಅದು ಎನ್‌ಡಿಎಗೆ ಹೋಗುತ್ತದೆ.