ಅವೈಜ್ಞಾನಿಕ ರೇಷನ್ ಕಾರ್ಡ್ ಪರಿಷ್ಕರಣೆ : ಒಂದೇ ಏಟಿಗೆ 2 ಗ್ಯಾರೆಂಟಿ ಯೋಜನೆ ಢಮಾರ್ - ಆರ್.ಅಶೋಕ್ | JANATA NEWS
ಬೆಂಗಳೂರು : ಸರ್ಕಾರಿ ಖರ್ಚು ನಿರ್ವಹಣೆ ಹಾಗೂ ಅನಧಿಕೃತ ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆಗೆ ಸಾಕಷ್ಟು ಜನಾಕ್ರೋಶ ವ್ಯಕ್ತವಾಗಿದ್ದು, ಲಕ್ಷಾಂತರ ಜನರಿಗೆ ರೇಷನ್ ಬಿಸಿ ತಟ್ಟಿದೆ, ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ, ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಗಂಭೀರ ಆರೋಪ ಮಾಡಿರುವ ಬೆನ್ನಲ್ಲೇ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದೆ.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, ರೇಷನ್ ಕಾರ್ಡ್ ಪರಿಷ್ಕರಣೆ ಮೂಲಕ ಕಾಂಗ್ರೆಸ್ ಸರ್ಕಾರ 2 ಗ್ಯಾರಂಟಿ ಖರ್ಚು ಕಮ್ಮಿ ಮಾಡಲು ಮೋಸದ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಒಂದೇ ಏಟಿಗೆ ಎರಡು ಗ್ಯಾರೆಂಟಿ ಢಮಾರ್! ಮಾನದಂಡಗಳ ನೆಪದಲ್ಲಿ ದಿಢೀರನೆ ಏಕಾಏಕಿ ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆಯ ಹಿಂದೆ ಬಡವರಿಗೆ ಮೋಸ ಮಾಡುವ ದೊಡ್ಡ ಹುನ್ನಾರವೇ ಅಡಗಿದೆ. ಬಿಪಿಎಲ್ ಕಾರ್ಡು ರದ್ದು ಮಾಡುವ ಮೂಲಕ ಅನ್ನಭಾಗ್ಯದ ಹಣಕ್ಕೆ ಕನ್ನ ಹಾಕುವುದರ ಜೊತೆಗೆ, ಗೃಹಲಕ್ಷ್ಮಿ ಹಣಕ್ಕೂ ಕತ್ತರಿ ಹಾಕಲಿದೆ ಈ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ.", ಎಂದು ಹೇಳಿದ್ದಾರೆ.
"ನುಡಿದಂತೆ ನಡೆದ ಸರ್ಕಾರ ಎನ್ನುವುದು ಕೇವಲ ಬಿಟ್ಟಿ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದು, ನುಡಿಯುವುದು ಒಂದು, ಮಾಡುವುದು ಇನ್ನೊಂದು ಎನ್ನುವುದೇ ಈ ಸರ್ಕಾರದ ನಿಜವಾದ ಅಸಲೀಯತ್ತು.", ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.