ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ | JANATA NEWS

ಬೆಂಗಳೂರು : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸರಕಾರಿ ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆ, ಪುಟಪಾತ ಹಾಗೂ ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಆಗ್ರಹಿಸಿದ್ದಾರೆ.
"ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇನೆ. ಸ 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಸರ್ಕಾರದ ಆಶಯ ಎಲ್ಲರಿಗೂ ಅನ್ವಯ ಆಗಬೇಕು. ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿ.", ಎಂದು ಯತ್ನಾಳ್ ಹೇಳಿದ್ದಾರೆ.
ಆರ್. ಎಸ್. ಎಸ್. ಪಥಸಂಚಲನ ನಿರ್ಬಂಧ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಚನೆ ಕುರಿತು ನಡೆದ ಚರ್ಚೆಯ ಬೆನ್ನಲ್ಲೇ, ಸರ್ಕಾರಿ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯ ಅನುಮತಿ ಪಡೆಯಬೇಕು ಎಂದು ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಿತ್ತು.
ಈ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಚಿವ ಪ್ರಿಯಾಂಕ ಖರ್ಗೆ ಮಾದರಿಯಲ್ಲಿ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸರಕಾರಿ ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆ, ಪುಟಪಾತ ಹಾಗೂ ಸರ್ಕಾರಿ ಆವರಣಗಳಲ್ಲಿ ಪೂರ್ವ ಅನುಮತಿ ಇಲ್ಲದೆ ನಮಾಜ್ ನಡೆಸದಂತೆ ಆಗ್ರಹಿಸಿದ್ದಾರೆ.
ಅನುಮತಿಯಿಲ್ಲದೆ ರಸ್ತೆ, ಪುಟಪಾತ ಹಾಗೂ ಸರ್ಕಾರಿ ಆವರಣಗಳಲ್ಲಿ ನಮಾಜ್ ಸಲ್ಲಿಸುವ ಚಟುವಟಿಕೆಗಳಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟಾಗುತ್ತಿದೆ. ಇದು ಭಾರತೀಯ ಸಂವಿಧಾನದ ಕಲಂ 19 ಮತ್ತು 21ರ ಅಡಿಯಲ್ಲಿ ಖಾತರಿಯಾದ ಮುಕ್ತ ಸಂಚಾರ ಹಾಗೂ ಭದ್ರತೆ ಎಂಬ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿದೆ. ಹೀಗಾಗಿ ಸರ್ಕಾರದ ಕಚೇರಿಗಳು ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್‌ಗೆ ವಿಶೇಷ ಅನುಮತಿ ನೀಡಬಾರದು. ಇತರ ಸಂಸ್ಥೆಗಳ ಕಾರ್ಯಚಟುವಟಿಕೆ ನಿರ್ಬಂಧಿಸಿ ಇಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದು ಆಡಳಿತದ ಮೇಲಿನ ನಂಬಿಕೆಗೆ ಚ್ಯುತಿ ತರಬಹುದಾದ ಕಾರಣ ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರ್ಕಾರ ಆದೇಶಿಸಬೇಕು. ಅನುಮತಿಯಿಲ್ಲದೆ ರಸ್ತೆಗಳು, ಪಾದಚಾರಿ ಮಾರ್ಗಗಳು ಅಥವಾ ಸರ್ಕಾರಿ ಆವರಣಗಳಲ್ಲಿ ನಮಾಜ್ ಸಲ್ಲಿಸಲು ಅವಕಾಶ ನೀಡದಂತೆ ಸೂಚಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.