ಇಂದು ರಥಸಪ್ತಮಿ ಹಬ್ಬ, ಸೂರ್ಯ ಪಥ ಬದಲಿಸುವ ದಿನ | Janata news
ಬೆಂಗಳೂರು : ಈ ವರ್ಷದ ಮಾಘ ಶುಕ್ಲದ ಏಳನೇ ದಿನ, ಇಂದು ರಥಸಪ್ತಮಿ. ಸೂರ್ಯ ಪಥ ಬದಲಿಸುವ ದಿನ.
ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವೇ ರಥಸಪ್ತಮಿ. ಭೂಮಿಗೆ ಬೆಳಕನ್ನೂ, ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯ ಉತ್ತರಾಯಣದತ್ತ ಚಲಿಸುವ ಪರ್ವ. ಮಾಘ ಶುಕ್ಲದ ಸಪ್ತಮಿಯಂದೇ ಸೂರ್ಯ ದೇವರು ಜನಿಸಿದ್ದಂತೆ.
ಸಪ್ತ ಕುದುರೆಗಳ ರಥವನ್ನೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ, ಹೊರಡುವ ಪರ್ವಕಾಲವೇ ಈ ರಥಸಪ್ತಮಿ. ಜಗದ ಅಧಿನಾಯಕ ಸೂರ್ಯ. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಈ ದಿನ ಸೂರ್ಯೋದಯದ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ನೀಡಿದರೆ ಸಕಲ ದುಃಖಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ.
ಮಾಘ ಶುದ್ಧ ಸಪ್ತಮಿಯಂದು ಸಂಗಮ ಕ್ಷೇತ್ರಗಳಲ್ಲಿ ಅಂದರೆ, ಎರಡು ಅಥವಾ ಅದಕ್ಕಿಂತ ಹೆಚ್ಚು ನದಿಗಳು ಸೇರುವಲ್ಲಿ ಇಲ್ಲವೇ ಸಮುದ್ರವನ್ನು ನದಿ ಸೇರುವ ಸ್ಥಳದಲ್ಲಿ ಸ್ನಾನ ಮಾಡಿದರೆ ದಿವ್ಯ ಮಂಗಳವುಂಟಾಗುತ್ತದೆ. ಶರೀರ ಆರೋಗ್ಯ ಪೂರ್ಣವಾಗುತ್ತದೆ. ಚರ್ಮರೋಗಗಳು ನಿವಾರಣೆ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.